ಅಂಕೋಲಾ: ಐತಿಹಾಸಿಕ ಮನ್ನಣೆ ಪಡೆದು ಬ್ರಿಟಿಷ್ ಅವಧಿಯಲ್ಲಿ ಗೌರವಕ್ಕೆ ಪಾತ್ರವಾದ ಇಲ್ಲಿನ ಬೆಳಂಬಾರದ ಹಾಲಕ್ಕಿ ಒಕ್ಕಲಿಗರ ಸಮಾಜದ ಅಂಕೋಲಾ ಸುಗ್ಗಿ ಪಟ್ಟಣದಲ್ಲಿ ಮಂಗಳವಾರ ಸಹಸ್ರಾರು ಜನರ ಸಮ್ಮುಖದಲ್ಲಿ ಮನೋರಂಜನೆಯ ಜೊತೆಗೆ ಸಾಂಪ್ರದಾಯಿಕ ಮೆರಗು ನೀಡುತ್ತಿದ್ದು ಮಂಗಳವಾರ ಸುಗ್ಗಿ ಕುಣಿತ ಮತ್ತು ಹಗರಣವನ್ನು ವೀಕ್ಷಿಸಲು ಸಹಸ್ರಾರು ಜನರು ಸೇರಿದ್ದಾರೆ.
ತಾಲೂಕು ಆಡಳಿತದ ಕಾರ್ಯಾಲಯದ ಎದುರು ಸುಗ್ಗಿ ಕುಣಿತ ನಡೆಸಿ ತಹಶೀಲ್ದಾರರಿಂದ ಗೌರವ ಸ್ವೀಕರಿಸುವ ಸಂಪ್ರದಾಯ ಬ್ರಿಟಿಷ್ ಆಡಳಿತ ಕಾಲದಿಂದಲೇ ನಡೆದು ಬಂದಿದ್ದು ಇಂದಿಗೂ ಮುಂದುವರೆದಿದೆ. ಹಾಲಕ್ಕಿ ಒಕ್ಕಲಿಗರ ಸಮಾಜದ ಕಲೆಯನ್ನು ಗುರುತಿಸಿ ಬ್ರಿಟಿಷ್ ಸರ್ಕಾರ ಪ್ರತಿ ವರ್ಷ ಸುಗ್ಗಿಯ ಸಂದರ್ಭದಲ್ಲಿ ತಾಮ್ರಪತ್ರ ಗೌರವ ನೀಡಿದ್ದು, ಈ ಗೌರವಕ್ಕೆ ಪಾತ್ರವಾದ ಏಕೈಕ ಸುಗ್ಗಿಯ ತಂಡ ಇದಾಗಿದೆ.
ಸುಗ್ಗಿ ಕುಣಿತದ ಜೊತೆಗೆ ಹಗರಣ ವಿಶೇಷ ಆಕರ್ಷಣೆಗೆ ಕಾರಣವಾಗುತ್ತದೆ. ಸಮಾಜದ ಆಗುಹೋಗುಗಳು ದೇಶವಿದೇಶಗಳಲ್ಲಿ ನಡೆಯುವ ವಿದ್ಯಮಾನಗಳು ಗ್ರಾಮೀಣ ಬದುಕಿನ ಚಿತ್ರಣಗಳನ್ನು ಹಗರಣಗಳನ್ನು ವಿಡಂಬನಾತ್ಮಕವಾಗಿ ಪ್ರದರ್ಶಿಸಿ ಸರ್ಕಾರವನ್ನು ಎಚ್ಚರಿಸುವ ಮಾರ್ಮಿಕತೆ ರೋಚಕವಾಗಿದೆ. ಈ
ವರ್ಷದ ಸುಗ್ಗಿಯ ಮೆರವಣಿಗೆಯಲ್ಲಿ ಮರಕಾಲುಕುಣಿತ, ತಲೆಯ ಮೇಲೆ ತುರಾಯಿ, ಕೈಯಲ್ಲಿ ನವಿಲುಕುಂಚ ಹಿಡಿದು ವಾದ್ಯ ಮತ್ತು ಹಿಮ್ಮೇಳಕ್ಕೆ ತಕ್ಕಂತೆ ಹೋ ಹೋ ಚೋ ಎಂದು ಕೂಗುತ್ತಾ ಆಕರ್ಷಕ ಹೆಜ್ಜೆ ಹಾಕಿ ಗುಂಪು ನೃತ್ಯ ಪ್ರದರ್ಶಿಸಿದ್ದು ವೀಕ್ಷಕರಿಗೆ ಸಂತಸ ನೀಡಿತು.
ಸಿಗರೇಟ್ ಸೇವನೆಯ ದುಷ್ಪರಿಣಾಮ, ಜನಗಣತಿ ಅವಾಂತರ, ಸ್ವಚ್ಛ ಭಾರತ ಅಭಿಯಾನ, ಪೌರಕಾರ್ಮಿಕರ ಕರ್ತವ್ಯ, ಮಹಿಳೆಯರ ಹಗ್ಗಜಗ್ಗಾಟ, ಧರ್ಮಸ್ಥಳದಲ್ಲಿ ನಡೆದ ಎಸ್ ಐ ಟಿ ತನಿಖೆ, ಸರ್ಕಾರದ ಭಾಗ್ಯಗಳ ಪ್ರಯೋಜನ, ಮಾರಿಕಾಂಬ ಜಾತ್ರೆ ವೈಭವ, ಕದಂಬರ ಕಾಲದ ಕಾಡು ಜನರ ಪೂಜಾ ಶೈಲಿ, ಗಾಂಜಾ ಸೇವನೆ ಪರಿಣಾಮ ಸೇರಿದಂತೆ ಹತ್ತಾರು ಹಗರಣಗಳು ಪ್ರದರ್ಶನಗೊಂಡವು. ಗೋ ಕಳ್ಳತನ, ಜನಗಣತಿ ಮತ್ತಿತರ ಹಗರಣಗಳು ಸಂಬಂಧಿಸಿದವರ ಕಣ್ಣು ತೆರೆಸುವ ಪ್ರಯತ್ನವನ್ನು ಒಳಗೊಂಡಿದ್ದವು. ಸಾವಿರಾರು ಜನರು ರಸ್ತೆಯ ಅಂಚುಗಳಲ್ಲಿ ನಿಂತು ಸುಗ್ಗಿ ಸಂಭ್ರಮವನ್ನು ಕಣ್ತುಂಬಿಸಿಕೊಳ್ಳುತ್ತಿದ್ದಾರೆ.