ಅಂಕೋಲಾ: ಮಹಿಳೆಯ ಮನೆ ಧ್ವಂಸಗೊಳಿಸಿ ಮಾನಹಾನಿ ಮಾಡಿದ ಆರೋಪದ ಮೇಲೆ ಐವರ ವಿರುದ್ಧ ದೂರು ದಾಖಲಾಗಿದೆ. ಇಲ್ಲಿನ ಗಾಬೀತಕೇಣಿಯಲ್ಲಿನ ಭಾವಿಕೇರಿ ಗ್ರಾಮ ಪಂಚಾಯಿತಿ 64ಬಿ ಮನೆಯಲ್ಲಿ ಸವಿತಾ ಗಣಪತಿ ಜೋಷಿ ತಮ್ಮ ಕುಟುಂಬದೊಂದಿಗೆ ವಾಸವಾಗಿದ್ದಾರೆ. ಸವಿತಾ ಮತ್ತು ಆಕೆಯ ತಾಯಿ ಕೆಲಸ ಮಾಡುವಾಗ ಆರೋಪಿಗಳಾದ ಕುಮಟಾ ಅಳ್ವೆಕೋಡಿಯ ಜೈವಿಠ್ಹಲ್ ಕುಬಾಲ, ಅಂಕೋಲಾದ ಉಪೇಂದ್ರ ನಾಯ್ಕ, ವಿಶ್ವನಾಥ ನಾಯ್ಕ, ಗಣೇಶ ನಾಯ್ಕ, ವಿನಾಯಕ ಶೆಟ್ಟಿ ಹಾಗೂ ಇತರರು ಸೇರಿಕೊಂಡು ಜೆಸಿಬಿ ಬಳಸಿ ಸವಿತಾ ವಾಸವಿದ್ದ ಮನೆಯನ್ನು ಅಗೆಯಲು ಆರಂಭಿಸಿದ್ದಾರೆ. ಯಾಕೆ ಹೀಗೆ ಮಾಡುತ್ತೀರಾ ಎಂದು ಕೇಳಿದ ಸವಿತಾ ಅವರಿಗೆ ಜೈವಿಠ್ಹಲ್ ಕುಬಾಲ ನಿನ್ನ ಬಟ್ಟೆಯನ್ನು ತೆಗೆದು ಹಾಕುತ್ತೇನೆ ಎಂದು ಅವಾಚ್ಯವಾಗಿ ನಿಂದಿಸಿದ್ದಾರೆ. ಉಳಿದವರು ಅದಕ್ಕೆ ದನಿಗೂಡಿಸಿದ್ದಾರೆ. ಮುಂದುವರೆದು ಜೈವಿಠ್ಹಲ್, ಸವಿತಾ ಅವರ ದೇಹದ ಮೇಲೆ ಕೈ ಹಾಕಿ ಮಾನಕ್ಕೆ ಕುಂದುಂಟು ಆಗುವ ರೀತಿಯಲ್ಲಿ ನಡೆದುಕೊಂಡಿದ್ದಾರೆ. ಮನೆಯನ್ನು ಆರೋಪಿಗಳು ಸೇರಿ ಧ್ವಂಸ ಮಾಡಿ ಹಣ, ಬಂಗಾರದ ಆಭರಣಗಳು ಹಾಗೂ ಇತರೆ ಸರಕುಗಳನ್ನು ನೆಲಸಮ ಮಾಡಿದ್ದಾರೆ ಎಂದು ಸವಿತಾ ಅವರು ಪೊಲೀಸ್ ಠಾಣೆಯಲ್ಲಿ ದೂರಿದ್ದಾರೆ. ಅಲ್ಲದೇ ತಮ್ಮ ವಿರುದ್ಧವೂ ಕುತಂತ್ರದ ಪ್ರಕರಣ ದಾಖಲು ಮಾಡುವ ಪ್ರಯತ್ನ ನಡೆಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.