ಅಂಕೋಲಾ: ತಾಲ್ಲೂಕಿನಲ್ಲಿ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ಸುಸೂತ್ರವಾಗಿ ಜರುಗುತ್ತಿದ್ದು ಮತದಾರರು ಮುಂಜಾನೆಯಿಂದಲೇ ಸರತಿಯಲ್ಲಿ ನಿಂತು ಮತದಾನ ಮಾಡಿದರು. ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಮತಗಟ್ಟೆಯಿದ್ದು ಅದರಿಂದ ನೂರು ಮೀಟರ್ ಒಳಗಿನ ನಿರ್ಬಂಧಿತ ಪ್ರದೇಶದಲ್ಲಿನ ಹೋಟೆಲ್ ಹಾಗೂ ಅಂಗಡಿಗಳನ್ನು ಮುಂಜಾಗ್ರತಾ ಕ್ರಮವಾಗಿ ಬಂದ್ ಮಾಡಲಾಗಿದೆ. ಮತಗಟ್ಟೆಯ ಎಡ ಮತ್ತು ಬಲ ಬದಿಯ 100 ಮೀಟರ್ ವ್ಯಾಪ್ತಿಯನ್ನು ಗುರುತಿಸಲಾಗಿದ್ದು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ವತಿಯಿಂದ ಕಿರು ಟೆಂಟ್ ಅಳವಡಿಸಲಾಗಿದೆ. ಆದರೆ ಎರಡು ಬದಿಯಲ್ಲಿಯೂ ಪ್ರತ್ಯೇಕವಾದ ಎರಡೆರಡು ಟೆಂಟ್ ಅಳವಡಿಕೆಗೆ ಅವಕಾಶವಿದೆಯೇ ಎಂದು ಸಾರ್ವಜನಿಕರಲ್ಲಿ ಪ್ರಶ್ನೆ ಮೂಡಿದೆ.
ಅಲ್ಲದೇ ಪೊಲೀಸರು ಸಾರ್ವಜನಿಕರ ಹಾಗೂ ಮತದಾರರಿಗೆ ನಿರ್ಬಂಧಿತ ಪ್ರದೇಶದ ಒಳಗೆ ಮಾತನಾಡಲು ನಿರ್ಬಂಧ ಹೇರಿದ್ದು ಕಾಂಗ್ರೆಸ್ ಪಕ್ಷದ ಟೆಂಟ್ ಮಾತ್ರ ನಿರ್ಬಂಧಿತ ಗೆರೆಯ ಒಳಭಾಗದಲ್ಲಿರುವುದು ಆಶ್ಚರ್ಯ ಮೂಡಿಸಿದೆ. ಸೂಕ್ತ ಸ್ಥಳಾವಕಾಶ ಲಭ್ಯವಿರದ ಹಿನ್ನಲೆ ನಿರ್ಬಂಧಿತ ಗೆರೆಯ ಅರ್ಧ ಭಾಗದ ಸಮೀಪದಲ್ಲಿ ಟೆಂಟ್ ಅಳವಡಿಕೆಗೆ ಮಾಡಲಾಗಿದೆ ಎನ್ನಲಾಗಿದ್ದು ಅದಕ್ಕೆ ಪ್ರತಿಯಾಗಿ ಬಿಜೆಪಿಯವರು ಸಹ ಗೆರೆಯ ಒಳಭಾಗದ ಅಂಗಡಿಯ ಮುಂದೆ ಟೇಬಲ್ ಹಾಕಿದ್ದಾರೆ.
ಬ್ಯಾರಿಕೇಡ್ ಮೊರೆ ಹೋದ ಪೊಲೀಸ್
ಸಿಬ್ಬಂದಿ ಕೊರತೆಯೋ ಅಥವಾ ಸೂಕ್ತ ಮಾರ್ಗದರ್ಶನದ ಕೊರತೆಯೋ ನಿರ್ಬಂಧಿತ ಪ್ರದೇಶದಲ್ಲಿನ ಜನದಟ್ಟಣೆ ಹೆಚ್ಚಾಗಿರುವ ಕಾರಣ ಪಿಎಸ್ಐ ಗುರುನಾಥ ಹಾದಿಮನಿ ಅವರು ಬ್ಯಾರಿಕೇಡ್ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಸ್ಥಳಕ್ಕೆ ಬಂದ ಅವರು ಮೊದಲಿಗೆ ಬ್ಯಾರಿಕೇಡ್ ಅಳವಡಿಸಲು ಸೂಚಿಸಿ ಗುಂಪುಗೂಡಿದ ಜನರನ್ನು ನಿರ್ಬಂಧಿತ ಪ್ರದೇಶದ ಹೊರಹೋಗುವಂತೆ ಸೂಚಿಸಿದರು. ಕೆಲವು ಸಿಬ್ಬಂದಿ ಮಾತ್ರ ಚುನಾವಣಾ ಕರ್ತವ್ಯದಲ್ಲಿ ನಿರತರಾಗಿದ್ದು ಸ್ವತಃ ಪಿಎಸ್ಸೈ ಗುರುನಾಥ ಹಾದಿಮನಿ ಅವರೇ ಸಿಪಿಐ ಚಂದ್ರಶೇಖರ ಮಠಪತಿ ಮಾರ್ಗದರ್ಶನದಲ್ಲಿ ಅಲ್ಲಲ್ಲಿ ಬ್ಯಾರಿಕೇಡ್ ಅಳವಡಿಸುವ ಮೂಲಕ ಬಂದೋಬಸ್ತ್ ಕ್ರಮ ಕೈಗೊಂಡಿದ್ದಾರೆ.