ಕಾರವಾರ: ನಗರದ ನಾಗಾವಾಡ ನಿವಾಸಿ, ಬಿಜೆಪಿ ಮುಖಂಡೆ ಹಾಗೂ ಕಾರವಾರ ನಗರಸಭೆಯ ವಾರ್ಡ್ ನಂ. 7ರ ಮಾಜಿ ಸದಸ್ಯೆ ಶಿಲ್ಪಾ ಸುಭಾಷ್ ನಾಯ್ಕ್ ಅವರನ್ನು ನ್ಯಾಯಾಲಯದ ಆದೇಶದ ಮೇರೆಗೆ ಬುಧವಾರ ಬಂಧಿಸಿ ಕಾರವಾರ ಕಾರಾಗೃಹಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ, ಸುಮಾರು ಮೂರು ವರ್ಷಗಳ ಹಿಂದೆ ಮನೆಯ ಮೇಲೆ ಸಾಲ ಪಡೆಯುವ ಸಂಬಂಧ ಶಿಲ್ಪಾ ನಾಯ್ಕ್ ಹಾಗೂ ಅವರ ಪತಿ ಸುಭಾಷ್ ನಾಯ್ಕ್ ಅವರು ಅಕ್ಷಯ ಕೋ-ಆಪರೇಟಿವ್ ಬ್ಯಾಂಕ್‌ನಿಂದ ಸಾಲ ಪಡೆದಿದ್ದರು. ಸಾಲ ಮರುಪಾವತಿಗಾಗಿ ಸುಮಾರು ₹28.65 ಲಕ್ಷ ಮೊತ್ತದ ಚೆಕ್ ನೀಡಲಾಗಿತ್ತು. ಆದರೆ ಚೆಕ್ ಅಮಾನ್ಯಗೊಂಡ ಹಿನ್ನೆಲೆಯಲ್ಲಿ ಸಾಲದ ಮೊತ್ತ ಪಾವತಿಯಾಗದ ಕಾರಣ ಬ್ಯಾಂಕ್ ವತಿಯಿಂದ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿತ್ತು ಎನ್ನಲಾಗಿದೆ.
ಈ ಪ್ರಕರಣದ ವಿಚಾರಣೆ ನಡೆಸಿದ ಜೆಎಂಎಫ್‌ಸಿ ನ್ಯಾಯಾಲಯವು ಬಾಕಿ ಹಣ ಪಾವತಿಸುವಂತೆ ಆದೇಶಿಸಿತ್ತು. ಬಳಿಕ ಈ ಆದೇಶದ ವಿರುದ್ಧ ಜಿಲ್ಲಾ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲಾಗಿದ್ದು, ಅಲ್ಲಿಯೂ ಬ್ಯಾಂಕ್‌ಗೆ ಹಣ ಪಾವತಿಸುವಂತೆ ಆದೇಶಿಸಲಾಗಿತ್ತು. ಹಣ ಪಾವತಿಸದಿದ್ದಲ್ಲಿ ಶಿಕ್ಷೆ ವಿಧಿಸುವುದಾಗಿ ನ್ಯಾಯಾಲಯ ಸೂಚಿಸಿತ್ತು ಎನ್ನಲಾಗಿದೆ. ನಂತರದ ಅವಧಿಯಲ್ಲಿ ನಿಗದಿತ ಸಮಯದೊಳಗೆ ಮೇಲ್ಮನವಿ ಸಲ್ಲಿಸದಿರುವುದು ಹಾಗೂ ಬ್ಯಾಂಕ್‌ಗೆ ಬಾಕಿ ಹಣ ಪಾವತಿಸದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದಂತೆ ಶಿಲ್ಪಾ ಸುಭಾಷ್ ನಾಯ್ಕ್ ಅವರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಬಂಧನಕ್ಕೂ ಮುನ್ನ ಅವರನ್ನು ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮೆಡಿಕಲ್ ಕಾಲೇಜು)ಯಲ್ಲಿ ಆರೋಗ್ಯ ತಪಾಸಣೆಗೆ ಒಳಪಡಿಸಿ, ಬಳಿಕ ಕಾರವಾರ ಕಾರಾಗೃಹಕ್ಕೆ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.ಬ್ಯಾಂಕ್ ಪರವಾಗಿ ನ್ಯಾಯವಾದಿ ಜಿ. ವಿ ನಾಯ್ಕ ವಾದಿಸಿದರು. ನಿಗದಿತ ಹಣವನ್ನು ಭರಣ ಮಾಡಿ ಬಿಡುಗಡೆಗೊಳಿಸಲು ಕಾನೂನು ಪ್ರಕ್ರಿಯೆ ನಡೆಯುತ್ತಿದ್ದು ಬಿಡುಗಡೆ ಸಾಧ್ಯತೆಯೂ ಇದೆ ಎನ್ನಲಾಗಿದೆ.