ಅಂಕೋಲಾ: ಪ್ರಯಾಣಿಕರ ಜೇಬಿನಲ್ಲಿದ್ದ ಹಣ ಎಗರಿಸಿದ ಕಳ್ಳರ ತಂಡವನ್ನು ಅಂಕೋಲಾ ಪೊಲೀಸರು ಸಿನಿಮೀಯ ರೀತಿಯಲ್ಲಿ ಕ್ಷೀಪ್ರಕಾರ್ಯಚರಣೆ ನಡೆಸಿ ಬಂಧಿಸಿದ್ದಾರೆ. ಪಟ್ಟಣದ ಮುಖ್ಯ ಬಸ್ ನಿಲ್ದಾಣದಲ್ಲಿ ಬುಧವಾರ ಮಧ್ಯಾಹ್ನ ಕಾರವಾರದ ಆಟೋ ಚಾಲಕ ಪ್ರದೀಪ ಕೇಣಿ ಕಾರವಾರಕ್ಕೆ ಹೋಗಲು ಬಸ್ ಏರುತ್ತಿದ್ದರು. ಆಗ ತನ್ನ ಜೇಬಿನಲ್ಲಿದ್ದ 7500 ರೂಪಾಯಿಗಳನ್ನು ಕಳ್ಳತನ ಮಾಡಿದ್ದ ಬಗ್ಗೆ ತಿಳಿದು ಬಂದಿದ್ದು ಸಂಜೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ಎನ್ನಲಾಗಿದೆ. ತುರ್ತಾಗಿ ಕಾರ್ಯಾಚರಣೆಗೆ ಇಳಿದ ಅಂಕೋಲಾ ಪೊಲೀಸ್ ತಂಡ ಆರೋಪಿಗಳನ್ನು ಸಿದ್ದಾಪುರ ಬಳಿಯಲ್ಲಿ ಬುಧವಾರ ರಾತ್ರಿಯ ಬಂಧಿಸಿ ವಿಚಾರಣೆಗೆ ಒಳಪಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಹುಬ್ಬಳ್ಳಿ ಮೂಲದ 6 ಜನರ ತಂಡವು ಖಾಸಗಿ ವಾಹನದಲ್ಲಿ ಬಂದು ಕಳ್ಳತನ ಕೃತ್ಯದಲ್ಲಿ ಭಾಗಿಯಾಗಿದ್ದರು ಎನ್ನುವ ಮಾಹಿತಿ ಕೇಳಿಬಂದಿದ್ದು ಪೊಲೀಸರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.