ಹೊನ್ನಾವರ: ಇಲ್ಲಿನ ಕಾಸರಕೋಡ ಹೊನ್ನಾವರ ಅರಣ್ಯ ವಿಭಾಗದ ವ್ಯಾಪ್ತಿಯ ಇಕೋ ಬೀಚ್ ನಲ್ಲಿನ ಇಕೋ ಪಾರ್ಕ್ ಯಾವುದೇ ನಿರ್ವಹಣೆ ಇಲ್ಲದೇ ಸೊರಗುತ್ತಿದ್ದು ನಿಗದಿತ ಶುಲ್ಕ ವಸೂಲಿ ಮಾಡುತ್ತಿದ್ದರೂ ನಿರ್ವಹಣೆಗೆ ಕ್ರಮ ಜರುಗಿಸದ ಇಲಾಖೆಯ ವಿರುದ್ದ ಅರಣ್ಯ ಸಚಿವರಿಗೆ ದೂರು ನೀಡಲು ನಿರ್ಧರಿಸಲಾಗಿದೆ.
ಅರಣ್ಯ ಇಲಾಖೆಯವರು ಇಕೋ ಪಾರ್ಕ್ ಪ್ರವೇಶ ಶುಲ್ಕ 10ರೂಪಾಯಿ ಮತ್ತು ಪಾರ್ಕಿಂಗ್ ಶುಲ್ಕ 10ರೂಪಾಯಿ ಪಡೆದುಕೊಂಡು ಯಾವುದೇ ನಿರ್ವಹಣೆ ಮಾಡದೆ ಹಣ ವಸೂಲಿಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿರುವ ಕುಮಟಾದ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ದೂರು ನೀಡಲು ನಿರ್ಧರಿಸಿದ್ದಾರೆ.
ಸಾರ್ವಜನಿಕರ ದೂರಿನ ಮೇರೆಗೆ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ಹೊನ್ನಾವರದಲ್ಲಿ ಇರುವ ಇಕೋ ಪಾರ್ಕ್ಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಅಲ್ಲಿನ ಸಿಮೆಂಟ್ ಕಲಾಕೃತಿಗಳು ಮತ್ತು ಮಕ್ಕಳ ಆಟಿಕೆಗಳು ಮುರಿದು ಬಿದ್ದಿವೆ. ಸಾರ್ವಜನಿಕರು ಕುಳಿತುಕೊಳ್ಳುವ ವಿಶ್ರಾಂತಿ ಸ್ಥಳದ ಮೇಲ್ಛಾವಣಿ ಒಡೆದು ಬೀಳುವ ಸ್ಥಿತಿಯಲ್ಲಿದೆ. ಪಾರ್ಕ ತುಂಬಾ ಗಿಡಗಂಟಿಗಳು ಬೆಳೆದು ನಿಂತಿವೆ. ಮರಗಳು ನೆಲಕ್ಕೆ ಉರುಳಿವೆ. ತ್ಯಾಜ್ಯದ ರಾಶಿಯೇ ಕಂಡು ಬರುತ್ತಿದೆ. ಕೇವಲ ಪ್ರವಾಸಿಗರಿಂದ ಹಣ ವಸೂಲಿ ಮಾಡುತ್ತಾರೆ ಆದರೆ ಯಾವುದೇ ಮುರಿದು ಬಿದ್ದ ಆಟಿಕೆ, ಗೊಂಬೆಗಳು, ಒಡೆದು ಹೋದ ಹೆಂಚುಗಳ ರಿಪೇರಿ ಮಾಡದೆ ಹಾಗೂ ಸ್ವಚ್ಛತೆ ಬಗ್ಗೆ ಗಮನ ನೀಡದೆ ಹಣ ಮಾಡುವ ದಂದೆಗೆ ಅರಣ್ಯ ಅಧಿಕಾರಿಗಳು ಮುಂದಾಗುತ್ತಿದ್ದಾರೆ ಎನ್ನುವ ನೇರವಾಗಿ ಕಂಡು ಬರುತ್ತಿದೆ. ಹಾಗಾದರೆ ಪ್ರವಾಸಿಗರಿಂದ ಸಂಗ್ರಹಣೆ ಮಾಡಿದ ಹಣ ಎಲ್ಲಿ ಹೋಗುತ್ತದೆ. ಕೇವಲ ನಾಮಕಾವಸ್ಧೆ ಇಕೋ ಪಾರ್ಕ್ ಮಾಡಿ ದುಡ್ಡು ಹೊಡೆಯುವ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. ಈ ರೀತಿಯಾದರೆ ಪ್ರವಾಸೋದ್ಯಮ ಹೇಗೆ ಬೆಳೆಯುತ್ತದೆ. ಇದು ಅರಣ್ಯ ಇಲಾಖೆಯ ವೈಫಲ್ಯ. ಇಂತಹ ಅಧಿಕಾರಿಗಳು ಪರಿಸರ ಕಾಪಾಡಲು ಯೋಗ್ಯರಲ್ಲ ಎನ್ನುವ ಭಾವನೆ ಮೊಳಕೆಯೊಡೆಯುವಂತಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯ, ಬೇಜವಾಬ್ದಾರಿತನದ ಮತ್ತು ಹಣದ ಅವ್ಯವಹಾರ ವಿರುದ್ದ ಅರಣ್ಯ ಸಚಿವರಾದ ರಾಮಲಿಂಗ ರೆಡ್ಡಿಯವರಿಗೆ ಕೇಂದ್ರದ ಮುಖಾಂತರ ದೂರು ನೀಡಲಾಗುವದು ಎಂದು ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರವಾಸಿಗರಾದ ಸೋಮಶೇಖರ್ ಆದಿ, ವಿಘ್ನೇಶ್ವರ ಅಂಬಿಗ ಹಾಗೂ ಸೇರಿದಂತೆ ಇತರರು ಹಾಜರಿದ್ದರು.