ಅಂಕೋಲಾ: ಕೇಣಿ ವಾಣಿಜ್ಯ ಬಂದರು ವಿರೋಧಿಸಿ ನಡೆಯುತ್ತಿರುವ ಧರಣಿಯ ಭಾಗವಾಗಿ ನವೆಂಬರ್ 25 ರಂದು ಅಂಕೋಲಾ ಬಂದ್ ಗೆ ಕರೆ ನೀಡುವ ಕುರಿತು ಹೋರಾಟಗಾರರ ಸಮಿತಿ ತೀರ್ಮಾನಿಸಿದೆ. ಈ ಕುರಿತಂತೆ ತಾಲೂಕು ದಂಡಾಧಿಕಾರಿಗಳಿಗೆ ಸಮಿತಿಯಿಂದ ಮನವಿ ಸಲ್ಲಿಸಲಾಗಿದೆ. ಒಂದು ವರ್ಷದಿಂದ ಕೇಣಿಯಲ್ಲಿ ಪ್ರಸ್ತಾಪಿತ ವಾಣಿಜ್ಯ ಬಂದರು ನಿರ್ಮಾಣವನ್ನು ವಿರೋಧಿಸಿ ಒಂದು ವರ್ಷದಿಂದ ನಿರಂತರವಾಗಿ ಶಾಂತಿಯುತ ಹೋರಾಟವನ್ನು ಮುಂದುವರಿಸುತ್ತಾ ಬಂದಿದ್ದೇವೆ. ಇದಕ್ಕೆ ಸರ್ಕಾರ ಮತ್ತು ಜನಪ್ರತಿನಿಧಿಗಳು ಸೂಕ್ತ ಪ್ರತಿಕ್ರಿಯೆ ನೀಡಿರುವುದಿಲ್ಲ. ಆದರೂ ಶಾಂತಿ ಸತಾಗ್ರಹದಲ್ಲಿ ನಂಬಿಕೆ ಇಟ್ಟ ನಾವು ನವೆಂಬರ್ 12ರಿಂದ ಅನಿರ್ದಿಷ್ಟ ಅವಧಿ ಧರಣಿ ಸತ್ಯಾಗ್ರಹಕ್ಕೆ ಚಾಲನೆ ನೀಡಿದ್ದೇವೆ. ಅದರ ತಾತ್ಕಾಲಿಕ ಮುಕ್ತಾಯದ ದಿನದಂದು ಅಂದರೆ ನವೆಂಬರ್ 25ರಂದು ಪಟ್ಟಣದ ವಿವಿಧ ಸಂಘಟನೆಗಳು, ಅಂಗಡಿ ಮುಂಗಟ್ಟುಗಳಿಗೆ ಸ್ವಯಂ ಪ್ರೇರಿತವಾಗಿ ವಿನಂತಿ ಮಾಡಿಕೊಂಡಿದ್ದು ಅಂಕೋಲಾ ಬಂದ್ ಕರೆ ನೀಡುತ್ತಿದ್ದೇವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಬಂದ್ ಗೆ ಬೆಂಬಲ
ನವೆಂಬರ್ 25ರಂದು ಅಂಕೋಲಾ ಬಂದ್ ಗೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿದೆ. ಅಲ್ಲದೆ ಪಟ್ಟಣದ ಆಟೋ ಚಾಲಕ ಮಾಲಕ ಸಂಘ, ಟೆಂಪೋ ಟ್ಯಾಕ್ಸಿ ಚಾಲಕ ಮಾಲಕ ಸಂಘ, ವರ್ತಕರ ಸಂಘ, ಹೋಟೆಲ್ ಮಾಲಕರ ಸಂಘ ಸೇರಿದಂತೆ ಹಲವು ಸಂಘಟನೆಗಳ ಬೆಂಬಲ ಕೋರಲಾಗಿದ್ದು ಧನಾತ್ಮಕ ಪ್ರತಿಕ್ರಿಯೆ ಬಂದಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಮಂಗಳವಾರ ನಡೆಯಲಿರುವ ಬಂದ್ ಗೆ ಅಂಕೋಲಾ ಮೀನುಗಾರ ಮಹಿಳೆಯರು ಸಾಥ್ ನೀಡಿದ್ದು ಮಾರುಕಟ್ಟೆಯನ್ನು ಬಂದ್ ಮಾಡಲಾಗುತ್ತಿದೆ. ವಾಣಿಜ್ಯ ಬಂದರು ವಿರೋಧಿ ಸಮಿತಿ ಮತ್ತು ಬಂದರು ವಿರೋಧಿಸುವ ಹತ್ತಾರು ಹಳ್ಳಿಗಳ ಗ್ರಾಮಸ್ಥರು ಬಂದ್ ಗೆ ಸಂಪೂರ್ಣ ಬೆಂಬಲ ನೀಡಲಿದ್ದು ಶಾಲಾ-ಕಾಲೇಜುಗಳಿಗೆ ವಿದ್ಯಾರ್ಥಿಗಳನ್ನು ಕಳುಹಿಸದೆ ಅಸಹಕಾರ ಮಾದರಿ ಪ್ರತಿಭಟನೆ ನಡೆಸಬಹುದು ಎನ್ನಲಾಗಿದೆ.