ಅಂಕೋಲಾ: ತಾಲೂಕಿನ ಕೇಣಿಯ ಸಾರ್ವಜನಿಕ ನವರಾತ್ರಿ ಉತ್ಸವ ಸಮಿತಿಯವರು ಪ್ರತಿಷ್ಠಾಪಿಸಿದ ದೇವಿ ಮೂರ್ತಿ ಆಕರ್ಷಣೀಯ ಕೇಂದ್ರ ಬಿಂದುವಾಗಿದ್ದು ಸ್ವತಃ ದೇವಿ ಮಹಾತ್ಮೆ ಪಾತ್ರದ ನಟಿಯೇ ತದ್ರೂಪಿ ಮೂರ್ತಿಯನ್ನು ನೋಡಿ ಕಣ್ತುಂಬಿಕೊಳ್ಳಲು ಇಂದು ಇಲ್ಲಿಗೆ ಆಗಮಿಸುತ್ತಿದ್ದಾರೆ.
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಶ್ರೀ ದೇವಿ ಮಾಹಾತ್ಮೆ ಧಾರಾವಾಹಿಯಲ್ಲಿ ದೇವಿ ಪಾತ್ರಕ್ಕೆ ಜೀವ ತುಂಬಿ ಜನ ಮೆಚ್ಚುಗೆ ಪಡೆದ ಜೀವಿತಾ ವಸಿಷ್ಠ ಅವರ ಅಭಿನಯ ಮೆಚ್ಚಿದ ಕೇಣಿಯ ಸಾರ್ವಜನಿಕ ನವರಾತ್ರಿ ಉತ್ಸವ ಸಮಿತಿಯವರು ನಟಿಯ ಪಾತ್ರದ ರೂಪದಲ್ಲಿಯೇ ತಮ್ಮ ಉತ್ಸವ ಮೂರ್ತಿ ಮಾಡಿ ಪ್ರತಿಷ್ಠಾಪಿಸಿದ್ದರು.
ದೇವಿ ಪಾತ್ರದ ಮೂಲಕ ತನ್ನ ಅಭಿನಯದಿಂದ ಕೊಟ್ಯಾಂತರ ಜನರ ಮನಗೆದ್ದ ಹೆಸರಾಂತ ಕಿರುತೆರೆ ನಟಿ ಜೀವಿತಾ, ಕೇಣಿ ಭಾಗದಲ್ಲಿ ಪ್ರತಿಷ್ಠಾಪಿಸಿದ ದೇವಿ ಮೂರ್ತಿ ದರ್ಶನ ಭಾಗ್ಯ ಪಡೆದುಕೊಳ್ಳಲು ಮತ್ತು ಇಲ್ಲಿನ ಅಭಿಮಾನಿಗಳಿಗೆ ಕೃತಜ್ಞತೆ ಸೂಚಿಸಲು ಇಂದು ಮಧ್ಯಾಹ್ನ 1.30ರ ಸುಮಾರಿಗೆ ಕೇಣಿ ಗ್ರಾಮಕ್ಕೆ ಆಗಮಿಸಲಿದ್ದು ಸ್ಥಳೀಯರೂ ಸ್ವಾಗತಕ್ಕೆ ಸಜ್ಜಾಗಿದ್ದಾರೆ.