ಕಾರವಾರ: ಮಂಗಳವಾರವಷ್ಟೇ ಅಂದಾಜು 198 ಕೋಟಿ ರೂಪಾಯಿ ವೆಚ್ಚದ ಹೊಸ ಜಿಲ್ಲಾ ಆಸ್ಪತ್ರೆಯ ಕಟ್ಟಡದಲ್ಲಿನ ಪಿಒಪಿ ಸ್ಲ್ಯಾಬ್ ಕಳಚಿ ಬಿದ್ದ ಘಟನೆ ನಡೆದಿತ್ತು. ಗುರುವಾರ ಸಹ ಮತ್ತೆ ಇದೇ ರೀತಿಯಲ್ಲಿ ಜಿಲ್ಲಾಸ್ಪತ್ರೆಯ ಎರಡನೇ ಮಹಡಿಯಲ್ಲಿ ಗ್ರಂಥಾಲಯ ಮತ್ತು ಸೆಮಿನಾರ್ ಕೊಠಡಿಯ ಮಧ್ಯಭಾಗದಲ್ಲಿ ಮತ್ತೆ ಸ್ಲ್ಯಾಬ್ ಕುಸಿತವಾಗಿದೆ.
450 ಹಾಸಿಗೆ ಸಾಮರ್ಥ್ಯದ ಹೊಸ ಕಟ್ಟಡವನ್ನು ನಿರ್ಮಾಣ ಮಾಡಲಾಗಿತ್ತು. 2021ರಲ್ಲಿ ಕಟ್ಟಡ ಕಾಮಗಾರಿ ಮುಗಿದು ಬಳಕೆಗೆ ಅನುವಾಗಬೇಕಿತ್ತು. ಆದರೆ 2025ರಲ್ಲಿ ಕಾಮಗಾರಿ ಮುಗಿದಿದ್ದು ಇದುವರೆಗೆ ಕಟ್ಟಡ ಉದ್ಘಾಟನೆಯಾಗಿಲ್ಲ. ಆದರೆ ಹಳೆಯ ಆಸ್ಪತ್ರೆಯಿಂದ ಹಂತ ಹಂತವಾಗಿ ಕೆಲವು ವಿಭಾಗಗಳನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗಿದೆ. ಕಾಮಗಾರಿಯ ಗುಣಮಟ್ಟದ ಕೊರತೆಯೋ ಇಲ್ಲವೇ ಇನ್ಯಾವುದೋ ಕಾರಣದಿಂದ ಪಿಓಪಿಸೀಲಿಂಗ್ ನಿರಂತರವಾಗಿ ಕುಸಿದು ಬೀಳುತ್ತಿದೆ. ಜನಸಾಮಾನ್ಯರು, ಹೊರರೋಗಿಗಳು ಮತ್ತು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ಹಾಗೂ ಸಿಬ್ಬಂದಿಗಳು ಸಂಚರಿಸುವ ಎರಡು ಭಾಗದ ಕೊಠಡಿಗಳ ನಡುವಿನ ಜಾಗದಲ್ಲಿ ಕುಸಿತ ಸಂಭವಿಸುತ್ತಿದ್ದು ಒಂದೊಮ್ಮೆ ಅನಾಹುತ ಸಂಭವಿಸಿದಲ್ಲಿ ಯಾರು ಹೊಣೆ? ಗುಣಮಟ್ಟದ ಕಾಮಗಾರಿಯ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳುವವರು ಯಾರು? ಹೊಸ ಜಿಲ್ಲಾ ಆಸ್ಪತ್ರೆ ಕಟ್ಟಡದ ಅವ್ಯವಸ್ಥೆಗಳಿಗೆ ಉತ್ತರ ನೀಡುವರು ಯಾರು ಎನ್ನುವುದು ಗೊಂದಲದ ಗೂಡಾಗಿದೆ. ಈ ನಡುವೆ ನಿರಂತರವಾಗಿ ಕುಸಿಯುತ್ತಿರುವ ಪಿಓಪಿ ಸ್ಲ್ಯಾಬ್ ಗಳಿಂದ ಹೊಸ ಕಟ್ಟಡದಲ್ಲಿ ಆಸ್ಪತ್ರೆಯ ಅಥವಾ ಇತರೆ ವೈದ್ಯಕೀಯ ವಿಭಾಗದ ತರಗತಿ ಇಲ್ಲವೇ ಪ್ರಾತಕ್ಷ್ಯತೆ ನಿರ್ವಹಿಸುವುದು ಸುರಕ್ಷಿತವೇ? ಎನ್ನುವುದು ಪ್ರಶ್ನೆಯಾಗಿದೆ.