ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವ ನಡುವೆಯೇ, ಸಂತ್ರಸ್ತ ಮಕ್ಕಳಿಗೆ ಸರ್ಕಾರದಿಂದ ದೊರೆಯಬೇಕಾದ ಪರಿಹಾರ ಹಾಗೂ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾದ ವಿವರಗಳನ್ನು ಸಂಗ್ರಹಿಸಿಟ್ಟುಕೊಳ್ಳದಿರುವುದು ಬೆಳಕಿಗೆ ಬಂದಿದೆ. ಅಧಿಕಾರಿಗಳ ಬಳಿ ಕೇಳಿದರೂ ಸಮಗ್ರ ಮಾಹಿತಿ ಸಿಗದಿರುವುದಕ್ಕೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಒಂದು ವಾರದೊಳಗೆ ಸಂಪೂರ್ಣ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 2023ರಲ್ಲಿ 46, 2024ರಲ್ಲಿ 60 ಹಾಗೂ 2025ರಲ್ಲಿ 60 ಸೇರಿದಂತೆ ಮೂರು ವರ್ಷಗಳಲ್ಲಿ ಒಟ್ಟು 166 ಪೋಕ್ಸೋ ಪ್ರಕರಣಗಳು ದಾಖಲಾಗಿವೆ. ಆದರೆ ಈ ಪ್ರಕರಣಗಳಲ್ಲಿ ಎಷ್ಟು ಆರೋಪಿಗಳಿಗೆ ಶಿಕ್ಷೆಯಾಗಿದೆ, ಎಷ್ಟು ಸಂತ್ರಸ್ತರಿಗೆ ವಿಕ್ಟಿಮ್ ಕಾಂಪೆನ್ಸೇಶನ್ ಫಂಡ್ ಮೂಲಕ ಪರಿಹಾರ ವಿತರಿಸಲಾಗಿದೆ ಎಂಬ ನಿಖರ ಮಾಹಿತಿ ಅಧಿಕಾರಿಗಳ ಬಳಿ ಲಭ್ಯವಿಲ್ಲ. ಸಂತ್ರಸ್ತ ಮಕ್ಕಳಿಗೆ ಪರಿಹಾರ ನೀಡಿರುವ ವಿವರಗಳನ್ನೇ ನೀಡಲು ಸಾಧ್ಯವಾಗದಿರುವ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದ್ದು, ಒಂದು ವಾರದೊಳಗೆ ಸಂಪೂರ್ಣ ಅಂಕಿ-ಅಂಶಗಳನ್ನು ಒದಗಿಸುವಂತೆ ಸೂಚಿಸಲಾಗಿದೆ ಎಂದರು.
ಇತ್ತೀಚೆಗೆ 12.5 ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆ ಮಗುವಿಗೆ ಜನ್ಮ ನೀಡಿದ್ದು, ಆಕೆಯ ಕುಟುಂಬಕ್ಕೆ ಸಮಾಜ ಕಲ್ಯಾಣ ಇಲಾಖೆಯಿಂದ ₹2.5 ಲಕ್ಷ ಪರಿಹಾರ ಮಂಜೂರಾಗಿದೆ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕವೂ ಮಧ್ಯಂತರ ಹಾಗೂ ಅಂತಿಮ ಪರಿಹಾರ ಪಡೆಯಲು ಅವಕಾಶವಿದೆ. ಪ್ರಕರಣದ ಸ್ವರೂಪಕ್ಕೆ ಅನುಗುಣವಾಗಿ ₹2 ಲಕ್ಷದಿಂದ ₹10 ಲಕ್ಷದವರೆಗೆ ಪರಿಹಾರ ದೊರೆಯಬಹುದು. ಅರ್ಹ ಸಂತ್ರಸ್ತರಿಗೆ ಈ ಸೌಲಭ್ಯ ತಲುಪಿಸುವಲ್ಲಿ ವಿಳಂಬವಾಗಬಾರದು ಎಂದು ತಿಳಿಸಿದರು. ಜಿಲ್ಲೆಯಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರದ 28ರಿಂದ 29 ಪ್ರಕರಣಗಳು ವರದಿಯಾಗಿವೆ. ಈ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಹಾಗೂ ಸಂತ್ರಸ್ತೆಯರಿಗೆ ನೀಡಿರುವ ಪರಿಹಾರದ ವಿವರಗಳನ್ನೂ ಒಂದು ವಾರದೊಳಗೆ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಎರಡು ವರ್ಷವಾದರೂ ಬಳಕೆಯಾಗದ ಮ್ಯಾಮೋಗ್ರಫಿ ಯಂತ್ರ
ಜಿಲ್ಲಾ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಎರಡು ವರ್ಷಗಳ ಹಿಂದೆ ಅಳವಡಿಸಿರುವ ಡಿಜಿಟಲ್ ಮ್ಯಾಮೋಗ್ರಫಿ ಯಂತ್ರ ಇನ್ನೂ ಕಾರ್ಯಾರಂಭ ಮಾಡದಿರುವುದು ಗಮನಕ್ಕೆ ಬಂದಿದೆ. ಅಗತ್ಯ ತರಬೇತಿ ಪಡೆದ ಸಿಬ್ಬಂದಿ ಇಲ್ಲದ ಕಾರಣ ಲಕ್ಷಾಂತರ ರೂಪಾಯಿ ವೆಚ್ಚದ ಉಪಕರಣ ಬಳಕೆಯಾಗುತ್ತಿಲ್ಲ. ತಕ್ಷಣ ಸಿಬ್ಬಂದಿಗೆ ತರಬೇತಿ ನೀಡಿ ಯಂತ್ರವನ್ನು ಕಾರ್ಯಾರಂಭಗೊಳಿಸುವಂತೆ ಸೂಚಿಸಲಾಗಿದೆ. ಗರ್ಭಿಣಿಯರಿಗೆ ಬಿಸಿನೀರಿನ ಸ್ನಾನದ ವ್ಯವಸ್ಥೆ ಕಲ್ಪಿಸುವಂತೆಯೂ ತಿಳಿಸಲಾಗಿದೆ ಎಂದರು.
ಆಂತರಿಕ ದೂರು ಸಮಿತಿಗಳಿಗೆ ಮರುತರಬೇತಿ
ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆಗೆ ರಚಿಸಿರುವ ಆಂತರಿಕ ದೂರು ಸಮಿತಿಗಳು (ಐಸಿಸಿ) ಕೇವಲ ದಾಖಲೆಗಳಿಗೆ ಸೀಮಿತವಾಗಬಾರದು ಎಂದು ಡಾ. ನಾಗಲಕ್ಷ್ಮಿ ಚೌಧರಿ ಎಚ್ಚರಿಸಿದರು. ಜಿಲ್ಲೆಯಲ್ಲಿ ನಡೆದ POSH ತರಬೇತಿ ಕಾರ್ಯಕ್ರಮಕ್ಕೆ ಸಮಿತಿಗಳ ಅಧ್ಯಕ್ಷರು ಮತ್ತು ಸದಸ್ಯರಲ್ಲಿ ಕಾಲು ಭಾಗದಷ್ಟು ಜನರು ಮಾತ್ರ ಹಾಜರಾಗಿದ್ದಾರೆ. ಅನೇಕ ಸಂಸ್ಥೆಗಳಲ್ಲಿ ಸಮಿತಿಯ ಸದಸ್ಯರು ಹಾಗೂ ಅವರ ಜವಾಬ್ದಾರಿಗಳ ಬಗ್ಗೆಯೇ ಅರಿವಿಲ್ಲದಿರುವುದು ಕಂಡುಬಂದಿದೆ. ಹೀಗಾಗಿ ಎಲ್ಲ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಸಮಿತಿಗಳ ಅಧ್ಯಕ್ಷರು ಹಾಗೂ ಸದಸ್ಯರಿಗೆ ಒಂದು ವಾರದೊಳಗೆ ಮರುತರಬೇತಿ ಆಯೋಜಿಸುವಂತೆ ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.