ಅಂಕೋಲಾ: ವಿವಿಧ ಯೋಜನೆಗಳ ನಂತರ ಜಿಲ್ಲೆಯಲ್ಲಿ ಉಳಿದಿರುವ ಸೀಮಿತ ಕಡಲ ತೀರವನ್ನು ಉಳಿಸಲು ಜಿಲ್ಲಾಧಿಕಾರಿಗಳು ಮನಸ್ಸು ಮಾಡಲಿ. ಜನರನ್ನು ಒಕ್ಕಲೆಬ್ಬಿಸಿ ಅವರ ಬದುಕನ್ನು ಸರ್ವನಾಶ ಮಾಡುವ ಯೋಜನೆಗಳು ಎಂದಿಗೂ ಬೇಡ. ಕೇಣಿ ವಾಣಿಜ್ಯ ಬಂದರು ನಿರ್ಮಾಣ ಪ್ರಸ್ತಾಪನೆಯನ್ನು ಸರ್ಕಾರ ಕೈಬಿಡಬೇಕು ಎಂದು ಮಾಜಿ ಸಚಿವ ಆನಂದ ಅಸ್ನೋಟಿಕರ್ ಹೇಳಿದರು.
ಕೇಣಿ ವಾಣಿಜ್ಯ ಬಂದರು ನಿರ್ಮಾಣ ವಿರೋಧಿಸಿ ಅಂಕೋಲಾ ಉಳಿಸಿ ಸಮಿತಿಯಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಸತ್ಯಾಗ್ರಹದಲ್ಲಿ ಶುಕ್ರವಾರ ಪಾಲ್ಗೊಂಡು ಅವರು ಮಾತನಾಡಿದರು. ಸರ್ಕಾರ ಮತ್ತು ಜನಪ್ರತಿನಿಧಿಗಳಿಗೆ ಜನರ ಸಮಸ್ಯೆ ಆಲಿಸಲು ಸಮಯವಿಲ್ಲ. ಅವುಗಳು ಯೋಜನೆಯನ್ನು ಕೈ ಬಿಡಲು ಮನಸ್ಸು ಮಾಡುತ್ತಿಲ್ಲ. ಕೇಣಿ ವಾಣಿಜ್ಯ ಬಂದರು ಅಹವಾಲು ಸಭೆಯಲ್ಲಿ ಶೇಕಡ 99 ರಷ್ಟು ಜನರು ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದನ್ನು ಜಿಲ್ಲಾಧಿಕಾರಿಗಳು ಕಣ್ಣಾರೆ ಕಂಡಿದ್ದಾರೆ. ಹಾಗಾಗಿ ಜಿಲ್ಲಾಧಿಕಾರಿಗಳು ಮನಸ್ಸು ಮಾಡಿ ಜನರ ಸಂಕಷ್ಟವನ್ನು ಅರ್ಥೈಸಿಕೊಂಡು ಯೋಜನೆ ಕೈ ಬಿಡುವ ವರದಿಯನ್ನು ಸರ್ಕಾರಕ್ಕೆ ತಲುಪಿಸಿದರೆ ಮಾತ್ರ ಕಾರ್ಯಗತವಾಗುತ್ತದೆ ಎಂದರು.
ಇಲ್ಲಿನ ಹೋರಾಟಗಾರ ತಾಳ್ಮೆ ಹಾಗೂ ನಿರಂತರ ಹೋರಾಟವನ್ನು ಕಾಯ್ದಿಟ್ಟುಕೊಂಡ ರೀತಿಯನ್ನು ಮೆಚ್ಚುತ್ತೇನೆ. ಜನಶಕ್ತಿಯ ಮುಂದೆ ಯಾವುದೇ ಸರ್ಕಾರ ಇಲ್ಲ. ಕೆಲವರಿಗೆ ಬಂದರು ಬರಬೇಕು ಎನ್ನುವ ಆಸೆ ಹೆಚ್ಚಾಗಿದೆ ಆದರೆ ಇಂತಹ ಬೃಹತ್ ಬಂದರಿನಿಂದ ಆಗುವ ದುಷ್ಪರಿಣಾಮ ತಿಳಿದಿಲ್ಲ ಎಂದರು.
ಚರ್ಚೆ ಹುಟ್ಟು ಹಾಕಿದ ಅಣ್ಣನ ಅಭಿಪ್ರಾಯ
ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಸಚಿವ ಆನಂದ ಅಸ್ನೋಟಿಕರ್, ನಾನು ರಾಜಕೀಯವಾಗಿ ಈಗ ಅಷ್ಟೊಂದು ಕಾಣಿಸಿಕೊಳ್ಳುತ್ತಿಲ್ಲ. ಬಂದರು ವಿರೋಧಿ ಹೋರಾಟದ ಕುರಿತಂತೆ ಎಂ ಎಲ್ ಸಿ ಗಣಪತಿ ಉಳ್ವೇಕರ ಅಣ್ಣನವರ ಜೊತೆ ನಿರಂತರ ಸಂಪರ್ಕದಲ್ಲಿದ್ದು ಮಾಹಿತಿ ತಿಳಿದುಕೊಳ್ಳುತ್ತಿದ್ದೇನೆ. ಅವರಿಂದ ಅಭಿಪ್ರಾಯ ಪಡೆಯುತ್ತೇನೆ ಎಂದರು. ಈ ಮಾತಿಗೆ ಸ್ಥಳದಲ್ಲಿದ್ದ ಕೆಲವರು ಅಸಮಾಧಾನ ತೋರ್ಪಡಿಸಿದಂತೆ ಕಂಡು ಬಂತು. ಬಂದರು ವಿರೋಧಿ ಹೋರಾಟಕ್ಕೆ ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ ಆರಂಭದಲ್ಲಿ ಕೈಜೋಡಿಸಿ ನಂತರ ಹಿಂದೆ ಸರಿದಿದ್ದರು. ಅಹವಾಲು ಸಭೆಯಲ್ಲಿಯೂ ಮೀನುಗಾರ ಮುಖಂಡರಾಗಿ ಕಾರಣಾಂತರಗಳಿಂದ ಭಾಗಿಯಾಗಿರಲಿಲ್ಲ. ಆದರೆ ಬಿಹಾರ ಚುನಾವಣೆ ವಿಜಯೋತ್ಸವ ಆಚರಿಸಲು ಬಂದ ಗಣಪತಿ ಉಳ್ವೇಕರ ಜೈಹಿಂದ್ ಸರ್ಕಲ್ ಬಳಿ ಪಟಾಕಿಯೊಂದಿಗಿನ ಸಂಭ್ರಮಕ್ಕೆ ಸಾಕ್ಷಿ ಆದರೆ ಹೊರತು ಅಲ್ಲಿಂದ ಕೇವಲ ಐದೇ ಮಾರು ದೂರದಲ್ಲಿ ವಾಣಿಜ್ಯ ಬಂದರು ವಿರೋಧಿಸಿ ಹೋರಾಟ ನಡೆಸುತ್ತಿದ್ದವರನ್ನು ಕಣ್ಣೆತ್ತಿಯೂ ನೋಡದೆ ತೆರಳಿದ್ದು ಆಕ್ರೋಶಕ್ಕೆ ಕಾರಣವಾಗಿತ್ತು. ಆದ್ದರಿಂದ ಮೂರು ತಿಂಗಳಿನಿಂದ ವಾಣಿಜ್ಯ ಬಂದರು ಹೋರಾಟದಿಂದ ದೂರವೇ ಉಳಿದ ಉಳ್ವೇಕರ ಹೆಸರು ಹೇಳುತ್ತಿದ್ದಂತೆ ಕೆಲಕಾಲ ಅಲ್ಲಿದ್ದವರೇ ಅವಕ್ಕಾದರು.