ಅಂಕೋಲಾ: ವಿವಿಧ ಮಾದರಿಯಲ್ಲಿ ಜನರನ್ನು ಹಣಕಾಸು ಸಂಸ್ಥೆಗಳನ್ನು ಮತ್ತು ಅಧಿಕಾರಿಗಳನ್ನು ವಂಚಿಸಿ ಲಕ್ಷಾಂತರ ರೂಪಾಯಿ ಪಂಗನಾಮ ಹಾಕಿ ಐದು ವರ್ಷಗಳಿಂದ ರಾಜಾರೋಷವಾಗಿ ಹೊರ ಜಿಲ್ಲೆಯಲ್ಲಿ ತಲಮರಿಸಿಕೊಂಡಿದ್ದ ಆರೋಪಿಯನ್ನು ಅಂಕೋಲಾ ಪೋಲೀಸರು ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.
ಮದನಗಿರಿ ಸಮೀಪದ ರಾಜೇಶ ಆನಂದ ಮಹಾಲೆ ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ತಲೆನೋವು ತಂದಿದ್ದ. ಹತ್ತಾರು ಜನರಿಗೆ ವಂಚಿಸಿ ಲಕ್ಷಾಂತರ ರೂಪಾಯಿ ದೋಚಿದ್ದ. ನಿರುದ್ಯೋಗಿಗಳಿಗೆ ಉದ್ಯೋಗ ಕೊಡುವುದಾಗಿ ಹಣ ಪಡೆದು ಮೋಸ ಮಾಡಿದ್ದ. ಅದಲ್ಲದೇ 3-4 ಚೆಕ್ ಬೌನ್ಸ್ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರು ಆತನನ್ನು ಬಂಧಿಸಲು ಪ್ರಯತ್ನಿಸುತ್ತಿದ್ದರು ಎನ್ನಲಾಗಿದೆ. ವಿದ್ಯುತ್ ಕಾಮಗಾರಿಯ ಗುತ್ತಿಗೆ ಕೆಲಸ ಮಾಡಿಸಿಕೊಂಡು ಅವರಿಗೆ ವೇತನ ಪಾವತಿಸದೆ, ಗುತ್ತಿಗೆದಾರರಿಗೂ ಹಾಗೂ ಕೆಲ ಹೊರ ಗುತ್ತಿಗೆ ಅಧಿಕಾರಿಗಳಿಗೂ ಮೋಸ ಮಾಡಿದ್ದ ಎನ್ನಲಾಗಿದೆ. 5 ವರ್ಷಗಳ ಹಿಂದೆ ಜಿಲ್ಲೆಯ ಎಲ್ಲಾಪುರ ಅಂಕೋಲಾ ಕುಮಟಾ ತಾಲೂಕಿನ ಹತ್ತಾರು ಜನರಿಗೆ ಪಂಗನಾಮ ಹಾಕಿ ಪ್ರಕರಣ ಗಂಭೀರವಾಗಿ ಪೊಲೀಸರು ಹುಡುಕಾಟ ಆರಂಭಿಸಿದ ನಂತರ ಜಿಲ್ಲೆಯಿಂದ ಕಾಲ್ಕಿತ್ತಿದ್ದ ಎನ್ನಲಾಗಿದೆ. ಮೂಲಗಳ ಪ್ರಕಾರ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ತಲೆಮರಿಸಿಕೊಂಡಿದ್ದು ಅಲ್ಲಿಯೂ ಹಳೆಯ ಚಾಳಿಯನ್ನೇ ಮುಂದುವರಿಸಿದ್ದ. ದೇವರ ಪೂಜೆಯ ನೆನಪದಲ್ಲಿ ಅಲ್ಲಿಯೂ ಹತ್ತಾರು ಮಂದಿಗೆ ಪಂಗನಾಮ ಹಾಕಿದ್ದ ಎಂದು ತಿಳಿದು ಬಂದಿದೆ. ಪ್ರಕರಣದ ಗಂಭೀರತೆಯನ್ನು ಅರಿತುಕೊಂಡ ಪೊಲೀಸ ಇಲಾಖೆ ಆರೋಪಿಯನ್ನು ಬಂಧಿಸಲು ಡಿವೈಎಸ್ಪಿ ಗಿರೀಶ್ ಮಾರ್ಗದರ್ಶನದಲ್ಲಿ ಸಿಪಿಐ ಚಂದ್ರಶೇಖರ ಮಠಪತಿ ಮತ್ತು ಪಿಎಸ್ಐ ಸುನಿಲ್ ಹುಲ್ಲೋಳಿ ನೇತೃತ್ವದಲ್ಲಿ ಪ್ರಯತ್ನ ನಡೆಸಿದೆ. ಖಚಿತ ಮಾಹಿತಿಯ ಮೇರೆಗೆ ಗದಗ ಜಿಲ್ಲೆಯಲ್ಲಿದ್ದ ಆರೋಪಿಯನ್ನು ಸಿಬ್ಬಂದಿ ಶೇಖರ್ ಸಿದ್ದಿ ಚಾಣಾಕ್ಷತನದಿಂದ ವಶಕ್ಕೆ ಪಡೆದುಕೊಂಡು ಅಂಕೋಲಾ ಠಾಣೆಗೆ ಕರೆತಂದಿದ್ದು ಪೊಲೀಸರು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ. ರಾಜೇಶ್ ಮಹಾಲೆ ಬಂಧನವಾಗುತ್ತಿದ್ದಂತೆ ವಂಚನೆಗೆ ಒಳಗಾದ ಹತ್ತಾರು ಜನರು ಪೊಲೀಸ್ ಠಾಣೆಗೆ ಬಂದು ಅಳಲು ತೋಡಿಕೊಂಡು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ