ಅಂಕೋಲಾ: ತಾಲೂಕಿನಲ್ಲಿ ಈ ಹಿಂದಿನಿಂದಲೂ ಶಾಂತಿ ಸೌಹಾರ್ದತೆಯಿಂದ ಈದ್ ಮಿಲಾದ್ ಮೆರವಣಿಗೆ ಸಾಗುತ್ತಿದ್ದು ಯಾವುದೇ ಧಾರ್ಮಿಕ ಸಂಘರ್ಷಕ್ಕೆ ಅವಕಾಶ ನೀಡುತ್ತಿರಲಿಲ್ಲ. ಬುಧವಾರ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ಟೈನ್ ದೇಶದ್ದು ಎನ್ನಲಾದ ಧ್ವಜವನ್ನು ಯುವಕನೋರ್ವ ಪ್ರದರ್ಶನ ಮಾಡಿದ್ದು ಕೆಲಕಾಲ ಗೊಂದಲದ ವಾತಾವರಣಕ್ಕೆ ಕಾರಣವಾಗಿತ್ತು. ಆದರೆ ತಕ್ಷಣವೇ ಅದನ್ನು ಗಮನಿಸಿದ ಪೊಲೀಸ್ ಸಿಬ್ಬಂದಿ ಸಿಪಿಐ ಚಂದ್ರಶೇಖರ ಮಠಪತಿ ಅವರ ಗಮನಕ್ಕೆ ತಂದಿದ್ದಾರೆ. ಕಾರ್ಯಪ್ರವೃತ್ತರಾದ ಅವರು ಯುವಕನಿಗೆ ತಿಳಿಹೇಳಿ ಅಂಥ ಧ್ವಜ ಪ್ರದರ್ಶನಕ್ಕೆ ಅವಕಾಶವಿಲ್ಲ ಎನ್ನುವುದನ್ನು ತಿಳಿಸಿದ್ದಾರೆ. ಈ ವಿಷಯವು ಈಗ ರಾಜಕೀಯ ಸ್ವರೂಪವನ್ನು ಪಡೆದುಕೊಂಡಿದ್ದು ಪ್ಯಾಲೆಸ್ಟೈನ್ ಧ್ವಜ ಪ್ರದರ್ಶನ ಮಾಡಿದವರ ವಿರುದ್ಧ ಸಂಜೆ ದೂರು ದಾಖಲಿಸುವ ಕುರಿತು ತಾಲ್ಲೂಕು ಬಿಜೆಪಿ ಮಂಡಲ ಕ್ರಮ ಕೈಗೊಂಡಿದೆ.