ಅಂಕೋಲಾ: ಬ್ಯಾಂಕ್ ಆಫ್ ಬರೋಡ, ಸಹಕಾರಿ ಸಂಘ ಮತ್ತು ಕಿರಾಣಿ ಅಂಗಡಿಗಳಲ್ಲಿ ಕಳ್ಳತನ ಮಾಡಿದ ಕುಖ್ಯಾತ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ತಾಲ್ಲೂಕಿನ ಹಳವಳ್ಳಿಯ ವಿನಾಯಕ ಕಮಲಾಕರ ಸಿದ್ದಿ(19), ನಾಗೇಶ ಸುಬ್ರಾಯ ಸಿದ್ದಿ(24) ದುಗ್ಗದಮನೆಯ ರಾಜೇಶ ಲಕ್ಷ್ಮಣ ಸಿದ್ದಿ (27) ಮಳಲ್‌ಗಾವನ ಪ್ರಶಾಂತ ಅನಂತ ಸಿದ್ದಿ(19) ಕಲ್ಲೇಶ್ವರದ ನಿಲೇಶ ಗಣಪತಿ ಸಿದ್ದಿ(38) ಬಂಧಿತ ಆರೋಪಿಗಳು.
ಜನವರಿ 12ರಂದು ತಾಲ್ಲೂಕಿನ ಸುಂಕಸಾಳದ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಕಳ್ಳತನಕ್ಕೆ ಪ್ರಯತ್ನ ನಡೆಸಿದ ಕುರಿತು ಶಾಖಾಧಿಕಾರಿ ಸುಮಿತ್ ನಾಯ್ಕ ದೂರು ಸಲ್ಲಿಸಿದ್ದರು. ಸಮೀಪದ ಹೆಗ್ಗಾರದ ಕಲ್ಪತರು ವಿವಿಧೋದ್ದೇಶಗಳ ಸಹಕಾರಿ ಸಂಘ ಹಾಗೂ ಕನಕನಹಳ್ಳಿಯ ಅನ್ನಪೂರ್ಣ ಮಾರ್ಟ್ ಕಿರಾಣಿ ಅಂಗಡಿಯಲ್ಲಿ ಕಳ್ಳತನವಾಗಿರುವ ಕುರಿತು ಸಹ ದೂರು ದಾಖಲಾಗಿದ್ದು, ಎಲ್ಲಾ ಪ್ರಕರಣದ ಆರೋಪಿಗಳ ಪತ್ತೆಗೆ ಪೋಲೀಸರು ತಲೆಕೆಡಿಸಿಕೊಂಡಿದ್ದು ಕಾರ್ಯಪ್ರವೃತ್ತರಾಗಿದ್ದರು. ಪೊಲೀಸ್ ಸಿಬ್ಬಂದಿಗಳ ಸಮಯೋಚಿತ ಪ್ರಯತ್ನದಿಂದಾಗಿ ಆರೋಪಿಗಳು ಬಲೆಗೆ ಬಿದ್ದಿದ್ದಾರೆ. ಆರೋಪಿತರಿಂದ ಮೂರು ಬೈಕುಗಳನ್ನು ಪೊಲೀಸರು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡಿದ್ದಾರೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಮಹಾದೇವ ಸಿದ್ದಿ, ಪ್ರಶಾಂತ ನಾಯ್ಕ, ಮಹಾಬಲೇಶ್ವರ ನಾಯಕ, ಆಸಿಫ್ ಕುಂಕೂರು, ಶಿವಾನಂದ ನಾಗರದಿನ್ನಿ, ಹೊನ್ನಪ್ಪ ವಗ್ಗಣವರ, ರಾಯೀಸ ಬಾಗವಾನ್, ವಿಜಯ್ ಟಿ, ಮಾರುತಿ ಕೆ. ಎಚ್. ಉದಯ ಗುನಗಾ ಮತ್ತು ಬಬನ್ ಕದಂ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದು ಸಿಬ್ಬಂದಿಗಳ ಪ್ರಯತ್ನಕ್ಕೆ ಪೊಲೀಸ ಅಧೀಕ್ಷಕ ದೀಪನ್ ಎಂ.ಎನ್. ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.