ಅಂಕೋಲಾ: ಗೃಹ ಸಚಿವರ ಹೆಸರು ಹೇಳಿಕೊಂಡು ಶಾಸಕ ಸ್ಥಾನದ ಅಪೇಕ್ಷೆಯಿಂದ ಗೋಪಾಲಕೃಷ್ಣ ನಾಯಕ ಆಟಾಟೋಪ ಮೆರೆಯುತ್ತಿದ್ದು ಅದಕ್ಕೆ ಕಡಿವಾಣ ಹಾಕಬೇಕು. ಗೃಹ ಸಚಿವರ ಪ್ರಭಾವ ನಿಲ್ಲಿಸಬೇಕು ಮತ್ತು ಗೃಹ ಸಚಿವ ಪರಮೇಶ್ವರ ತಾಲ್ಲೂಕಿಗೆ ಆಗಮಿಸುವವರೆಗೆ ಅನಿರ್ಧಿಷ್ಠಾವಧಿ ಧರಣಿ ಮುಂದುವರೆಯುತ್ತದೆ ಎಂದು ಖ್ಯಾತ ನ್ಯಾಯವಾದಿ ನಾಗರಾಜ ನಾಯಕ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆ ಮತ್ತು ತಹಶೀಲ್ದಾರ್ ಕಚೇರಿ ಎದುರು ಸಾರ್ವಜನಿಕ ಧರಣಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಅಂಕೋಲಾ ಪೊಲೀಸರು ನಿಜವಾದ ಅಪರಾಧಿಗಳನ್ನು ಬಿಟ್ಟು ಅಮಾಯಕರ ಮೇಲೆ ಪ್ರಕರಣ ದಾಖಲಿಸುತ್ತಿದ್ದಾರೆ. ಗೋಪಾಲಕೃಷ್ಣ ನಾಯಕ ಗಾಡ್ ಫಾದರ್ ಸಚಿವ ಪರಮೇಶ್ವರ ಬರುವವರೆಗೂ ಪ್ರತಿಭಟನೆ ಮುಂದುವರೆಯುತ್ತದೆ. ಗೃಹ ಸಚಿವರ ಆಪ್ತ ಎಂದು ಹೇಳಿಕೊಳ್ಳುತ್ತಾ ಗೃಹ ಸಚಿವರ ಕಚೇರಿಯಿಂದ ಫೋನ್ ಮಾಡಿಸುತ್ತಾ ಕೆಲವು ದುಷ್ಪೃತ್ಯಗಳನ್ನು ಮಾಡುತ್ತಿದ್ದಾನೆ. ಶಾಸಕನಾಗಬೇಕು ಎನ್ನುವ ಹುಚ್ಚಿನಿಂದ ಅಂಕೋಲಾದ ಶಾಂತ ಊರುಗಳಲ್ಲಿ ಅಶಾಂತಿ ಉಂಟುಮಾಡುತ್ತಿದ್ದಾನೆ ಎಂದರು.
ಅಂಕೋಲಾ ಪೊಲೀಸರು ಯಾವ ಕೆಲಸವನ್ನು ಮಾಡದ ಸ್ವತಂತ್ರ ಕಳೆದುಕೊಂಡು ಬಿಟ್ಟಿದ್ದಾರೆ. ಸಿ.ಆರ್.ಪಿ.ಸಿ, ಬಿ.ಎನ್.ಎಸ್. ಎಲ್ಲವೂ ಬಿಟ್ಟು ಗೋಪಾಲಕೃಷ್ಣ ನಾಯಕ ಕಾನೂನು ಜಾರಿ ಮಾಡುತ್ತಿದ್ದಾರೆ. ವಂದಿಗೆಯಲ್ಲಿ ಸುಂದರ ಗ್ರಾಮದಲ್ಲಿ ಕಾರ್ಯಕ್ರಮ ನಡೆಯುವಾಗ ಗೋಪಾಲಕೃಷ್ಣ ನಾಯಕ ಚಿತಾವಣೆಯಿಂದ ಕೆಲವು ಯುವಕರು ನಾನು ಮಾತನಾಡುತ್ತಿರುವಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ ಆಟೋಟೋಪಾ ಮೆರೆದಿದ್ದಾರೆ. ಅದರ ವಿರುದ್ಧ ದೂರು ನೀಡಲು ಬಂದಾಗ, ನಮ್ಮೊಂದಿಗೆ ಬಂದ ಕೆಲವು ಅಮಾಯಕರ ಮೇಲು ಗೋಪಾಲಕೃಷ್ಣ ನಾಯಕ ಚಿತಾವಣೆಯಿಂದ ದೂರು ದಾಖಲಿಸಿದ್ದಾರೆ. ಗೃಹ ಸಚಿವರ ಹೆಸರಿನಿಂದ ಅಂಕೋಲಾ ಠಾಣೆಯ ಸಿಪಿಐ ಗೋಪಾಲಕೃಷ್ಣ ನಾಯಕರಿಗೆ ತಮ್ಮ ಕುರ್ಚಿ ಬಿಟ್ಟುಕೊಡಬಹುದಾದ ಸನ್ನಿವೇಶ ಸೃಷ್ಟಿಯಾಗಿದೆ. ಐದಾರು ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಇಂಥವರನ್ನು ಸಭ್ಯ ಗ್ರಹ ಸಚಿವರು ಯಾಕೆ ಸಮೀಪ ಇಟ್ಟು ಕೊಂಡಿದ್ದಾರೆ ಎನ್ನುವುದೇ ಪ್ರಶ್ನೆಯಾಗಿದೆ. ಕ್ರಿಮಿನಲ್ ಹಿನ್ನೆಲೆ ಇದ್ದರೂ ಪೊಲೀಸರು ಪ್ರತಿಷ್ಠಿತ ವ್ಯಕ್ತಿ ಎಂದು ಕರೆಯುತ್ತಾರೆ. ಅಂಕೋಲಾ ಪೊಲೀಸ ಠಾಣೆ ಡಿವೈಎಸ್ಪಿ ಇಲ್ಲವೇ ಸಿಪಿಐ ನಿಯಂತ್ರಣದಲ್ಲಿ ಇಲ್ಲದೆ ಗೋಪಾಲಕೃಷ್ಣ ನಾಯಕ ನಿಯಂತ್ರಣದಲ್ಲಿದೆ. ಗೋಪಾಲಕೃಷ್ಣ ನಾಯಕ ಆಪ್ತ ಸೂರಜ್ ಹಮ್ಮಣ್ಣ ನಾಯಕ ಅಕ್ರಮ ವ್ಯವಹಾರದ ಮೂಲಕ, ಅಂಕೋಲಾದಲ್ಲಿ ಯುವಕರನ್ನು ಹಾಳು ಮಾಡುವ ಪ್ರಯತ್ನ ಮಾಡುತ್ತಿದ್ದಾನೆ ಎಂದರು.
ನ್ಯಾಯವಾದಿಯಾಗಿ ನ್ಯಾಯವನ್ನು ಅಪೇಕ್ಷೆ ಮಾಡುತ್ತೇನೆ. ಗೃಹ ಸಚಿವರು ಮತ್ತು ಅವರ ಕಾರ್ಯಾಲಯದ ಸಿಬ್ಬಂದಿ ಅಂಕೋಲಾ ಪೊಲೀಸ್ ಠಾಣೆಗೆ ಕರೆ ಮಾಡುವುದು ಹಸ್ತಕ್ಷೇಪ ನಡೆಸುವುದು ನಿಲ್ಲಿಸಬೇಕು. ನಿರಪರಾಧಿಗಳನ್ನು ಅಪರಾಧಿಗಳನ್ನಾಗಿ ಮಾಡುವ ಪ್ರಯತ್ನಕ್ಕೆ ತಡೆಗಟ್ಟಬೇಕು. ವಂದಿಗೆಯಲ್ಲಿ ಅಮಾಯಕ ಹುಡುಗರ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಗೋಪಾಲಕೃಷ್ಣ ನಾಯಕ ಸೇರಿದಂತೆ ಕೆಲವರ ವಿರುದ್ಧ 307 ದೂರು ದಾಖಲಾಯಿತು. ಆದರೆ ಅದರಲ್ಲಿ ಗೋಪಾಲಕೃಷ್ಣ ನಾಯಕ ಸೇರಿಸಿ ಮೂವರು ಆರೋಪಿಗಳ ಹೆಸರುಗಳನ್ನು ಕೈ ಬಿಡಲಾಯಿತು. ಅದೇ ಉಳಿದ ಪ್ರಕರಣಗಳಲ್ಲಿ ಪೊಲೀಸರು ಬೇರೆಯೇ ನಡೆದುಕೊಳ್ಳುತ್ತಾರೆ ಎಂದು ನಾಗರಾಜ ನಾಯಕ ಹೇಳಿದರು.