ಅಂಕೋಲಾ: ಇಲ್ಲಿನ ಪೊಲೀಸರು ಸರಿಯಾದ ರೀತಿಯಲ್ಲಿ ತನಿಖೆ ಮಾಡುತ್ತಿಲ್ಲ. ಸರಿಯಾದ ದೂರು ದಾಖಲಿಸುತ್ತಿಲ್ಲ. ಭಯದಿಂದ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ಶಾಸಕ ದಿನಕರ ಶೆಟ್ಟಿ ಪೊಲೀಸರ ವರ್ತನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗೃಹ ಸಚಿವರ ಆಪ್ತ ಗೋಪಾಲಕೃಷ್ಣ ನಾಯಕ ವಿರುದ್ಧ ನ್ಯಾಯವಾದಿ ನಾಗರಾಜ ನಾಯಕ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿಗೆ ಬೆಂಬಲ ವ್ಯಕ್ತಪಡಿಸಿ ಅವರು ಮಾತನಾಡಿದರು. ಅಧಿವೇಶನದಲ್ಲಿ ಹಿಂಸೆ ಗಲಭೆಗಳ ಬಗ್ಗೆ ಗೃಹ ಮಂತ್ರಿಗಳಿಗೆ ಪ್ರಶ್ನಿಸಿದರೆ ತನಗೆ ಏನು ಗೊತ್ತಿಲ್ಲ ಎನ್ನುತ್ತಾ ಬೋಗಸ್ ಮಾತನಾಡಿ ಯಾವ ಪ್ರಶ್ನೆಗಳಿಗೆ ಉತ್ತರ ನೀಡುವುದಿಲ್ಲ. ಗೃಹ ಮಂತ್ರಿಗಳ ಹೆಸರು ಬಳಕೆಯಾಗಿದ್ದರಿಂದ ಪೊಲೀಸರಿಗೂ ಭಯವಿದೆ. ಆ ಭಯದಿಂದ ನನ್ನ ಮೇಲೆ ದೂರು ದಾಖಲು ಮಾಡಬಹುದು. ಮಾಡಿದರೂ ನಾನು ಹೆದರುವುದಿಲ್ಲ ಎಂದು ಸ್ಥಳದಲ್ಲಿದ್ದ ಪೊಲೀಸ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು.
ನಂತರ ಮಾಧ್ಯಮದೊಂದಿಗೆ ಮಾತನಾಡಿ, ನ್ಯಾಯವಾದಿ ನಾಗರಾಜ ನಾಯಕರ ವಿರುದ್ಧ ದೂರು ದಾಖಲಿಸಿರುವುದು ನಾಚಿಕೆಗೇಡು. ಅವರು ನಮ್ಮ ಪಕ್ಷದ ಹಿರಿಯ ನಾಯಕರು. ಕಾರ್ಯಕರ್ತರಿಗೆ ಸಮಸ್ಯೆಯಾಗಿದ್ದರೆ ಒಂದು ರೂಪಾಯಿಯನ್ನು ಪಡೆಯದೆ ಅವರು ವಕಾಲತ್ತು ನಡೆಸುತ್ತಾರೆ. ಅವರ ಬೆಂಬಲಕ್ಕೆ ನಾವೆಲ್ಲ ಇದ್ದೇವೆ. ಪೊಲೀಸರಿಗೆ ಭಯ ಇದ್ದರೆ ನನ್ನ ಮೇಲೆಯೂ ದೂರು ದಾಖಲಿಸಲಿ. ನಾನು ಮೂರು ಬಾರಿ ಶಾಸಕನಾಗಿದ್ದರು ನನ್ನ ಕ್ಷೇತ್ರದಲ್ಲಿ ಇಂತಹ ದುರ್ಘಟನೆಗಳು ನಡೆದಿದ್ದು ಇಲ್ಲ. ಎಲ್ಲವನ್ನು ಶಾಂತ ರೀತಿಯಿಂದ ಬಗೆಹರಿಸಿಕೊಳ್ಳುತ್ತಿದ್ದೇವೆ. ನಾಗರಾಜ ನಾಯಕರು ಎಲ್ಲಿಗೂ ಕರೆದರೆ ಯಾವಾಗ ಕರೆದರೂ ಬರುತ್ತೇನೆ. ನಾನು ಯಾವ ಗೂಂಡಾಗಳಿಗೂ ಹೆದರುವುದಿಲ್ಲ. ಗೋಪಾಲಕೃಷ್ಣ ನಾಯಕರ ಗುಂಡಾಗಿರಿಗೆ ಪೊಲೀಸ್ ಇಲಾಖೆ ಕಾನೂನು ಪ್ರಕಾರ ಏನು ಕ್ರಮ ಕೈಗೊಳ್ಳುತ್ತದೆ ನೋಡೋಣ. ಆಮೇಲೆ ನಾವು ತೀರ್ಮಾನ ಮಾಡುತ್ತೇವೆ ಎಂದರು.
ಈ ನಡುವೆ ತಹಸಿಲ್ದಾರ್ ನಿಶ್ಚಲ್ ನರೋನಾ ಧರಣಿ ಸ್ಥಳಕ್ಕೆ ಆಗಮಿಸಿ ನ್ಯಾಯವಾದಿ ನಾಗರಾಜ ನಾಯಕರೊಂದಿಗೆ ತಡ ರಾತ್ರಿಯ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಗೃಹ ಸಚಿವರು ಆಗಮಿಸುವವರೆಗೂ ಧರಣಿ ಮುಂದುವರೆಯುತ್ತದೆ ಎಂದು ಸಂಘಟಕರು ತಿಳಿಸಿದರು. ವಕೀಲರ ಸಂಘಟನೆ ಸೇರಿದಂತೆ ಹಲವರು ನ್ಯಾಯವಾದಿ ನಾಗರಾಜ ನಾಯಕರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.