ಹೊನ್ನಾವರ: ಅತಿವೇಗದಿಂದ ನಿಯಂತ್ರಣ ಕಳೆದುಕೊಂಡ ಪರಿಣಾಮ ಬೈಕ್ ಕಂದಕಕ್ಕೆ ಉರುಳಿದ್ದು ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲ್ಲೂಕಿನ ಚಿಕ್ಕೊಳ್ಳಿಯ ಬಂಗಾರಗುಂಡಿ ಬಳಿ ನಡೆದಿದೆ. ಶಿರಸಿಯ ಸಂಪಖಂಡದ ಗುಡ್ಡೆಮನೆಯ ಕೃಷ್ಣಾ ಮಾತು ಗೌಡ(50) ಮೃತ ಪಟ್ಟ ಬೈಕ್ ಸವಾರ. ಕೃಷ್ಣಾ ಕೆ.ಎ. 20ಇಬಿ2845 ಸ್ಕೂಟಿಯಲ್ಲಿ ತಮ್ಮದೇ ಊರಿನ ಮಂಜುನಾಥ ಈರಾ ಗೌಡ ಅವರೊಂದಿಗೆ ಅರೆಅಂಗಡಿ - ಚಿಕ್ಕೊಳಿ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದರು. ಬಂಗಾರಗುಂಡಿಯ ಘಟ್ಟದ ಹತ್ತಿರ ರಸ್ತೆಯ ತಿರುವಿನಲ್ಲಿ ವೇಗದಿಂದ ನಿಯಂತ್ರಣ ಸಾಧ್ಯವಾಗದೇ ರಸ್ತೆಯಿಂದ 30 ರಿಂದ 40 ಅಡಿ ಆಳದಲ್ಲಿ ಪಲ್ಟಿಯಾಗಿದೆ. ಪಲ್ಟಿಯ ರಭಸಕ್ಕೆ ತಲೆಗೆ ಗಂಭೀರ ಗಾಯಗೊಂಡ ಕೃಷ್ಣಾ ಸ್ಥಳದಲ್ಲಿಯೇ ಮೃತಪಟ್ಟರು. ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.