ಅಂಕೋಲಾ: ಮನೆಗೆಲಸಕ್ಕೆ ಬರುತ್ತಿದ್ದ ಮಹಿಳೆಯೊಬ್ಬರು ಮಾಲೀಕರ ಸುಮಾರು 15 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳನ್ನು ಎಗರಿಸಿದ ಘಟನೆ ತಾಲ್ಲೂಕಿನ ಅಗಸೂರಿನಲ್ಲಿ ನಡೆದಿದೆ.
ಯಲ್ಲಾಪುರ ಹಾಲಿ ನಿವಾಸಿ ಭವಾನಿ ರಾಮಾ ಗೌಡ ಎಂಬಾಕೆ ಚಿನ್ನದ ಆಭರಣಗಳನ್ನು ಕಳ್ಳತನ ಮಾಡಿರುವ ಕುರಿತು ಅಗಸೂರಿನ ಜ್ಯೋತಿ ವೆಂಕಟರಮಣ ನಾಯಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 2022ನೇ ಸಾಲಿನಿಂದ ಜೂನ್ 2025ರ ನಡುವಿನ ಅವಧಿಯಲ್ಲಿ ಜ್ಯೋತಿ ನಾಯಕ ಅವರ ಮನೆ ಕೆಲಸಕ್ಕಿದ್ದ ಭವಾನಿ ಗೌಡ ಮನೆಯವರ ವಿಶ್ವಾಸಗಳಿಸಿ ಕಪಾಟಿನಲ್ಲಿದ್ದ ಬಂಗಾರದ ಆಭರಣಗಳನ್ನು ಹಾಗೂ ಅದರ ಬೀಗದ ಕೈ ಇಡುತ್ತಿದ್ದ ಜಾಗವನ್ನು ನೋಡಿಕೊಂಡು ಮಾಲಕಿ ಜ್ಯೋತಿ ನಾಯಕ ಅವರು ಅಣ್ಣನ ಅಕಾಲಿಕ ಮರಣದಿಂದ ಮಾನಸಿಕವಾಗಿ ಕುಗ್ಗಿದ ಸಂದರ್ಭ ನೋಡಿಕೊಂಡು ಕಳ್ಳತನಕ್ಕೆ ಇಳಿದಿದ್ದಾರೆ. ಬಂಗಾರದ ಸರ, ನೆಕ್ಲೆಸ್, ಬಳೆಗಳು, ಕಿವಿಯೋಲೆ, ಉಂಗುರ ಸೇರಿದಂತೆ 23 ಬಗೆಯ 14,89,000 ಮೌಲ್ಯದ ಆಭರಣಗಳನ್ನು ಕಳ್ಳತನ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದೆ. ಕಳ್ಳತನ ಮಾಡಿದ್ದ ವಿಷಯ ಮನೆಯ ಮಾಲೀಕರಿಗೆ ತಿಳಿದು ಭವಾನಿ ಗೌಡ ಅವರಿಗೆ ಕೇಳಿದ್ದು, ಫೈನಾನ್ಸ್ ಒಂದರಲ್ಲಿ ಇಟ್ಟಿದ್ದ ಬಗ್ಗೆ ಹಾಗೂ ತಿಂಗಳ ನಂತರ ಬಿಡಿಸಿ ಕೊಡುತ್ತೇನೆ ಎಂದು ಮನವಿ ಮಾಡಿಕೊಂಡಿದ್ದರಿಂದ ಮನೆಯ ಮಾಲೀಕರು ಅವಕಾಶ ನೀಡಿದ್ದರು ಆಭರಣಗಳನ್ನು ಹಿಂತಿರುಗಿಸದ ಹಿನ್ನೆಲೆ ದೂರು ನೀಡಲಾಗಿದೆ. ಸಿಪಿಐ ಚಂದ್ರಶೇಖರ ಮಠಪತಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.