ಕಾರವಾರ: ತಾಲೂಕಿನ ಅಮದಳ್ಳಿ ಟೋಲ್‌ನಾಕ ಬಳಿಯಲ್ಲಿ ಅರಣ್ಯ ಪ್ರದೇಶದ ಬಂಡೆಯೊಂದರ ಮೇಲೆ ಸೋಮವಾರ ಸಂಜೆ ಚಿರತೆಯೊಂದು ಪ್ರತ್ಯಕ್ಷವಾಗಿತ್ತು. ದೂರದಿಂದಲೇ ಫೋಟೋ ಕ್ಲಿಕ್ಕಿಸಿದ ಸ್ಥಳೀಯರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟರು. ದೂರದಿಂದ ಫೋಟೋ ಕ್ಲಿಕ್ಕಿಸಿದಾಗ ಹುಲಿಯಂತೆ ಕಂಡುಬಂದಿದ್ದು ನಮ್ಮೂರಿಗೆ ಹುಲಿ ಬಂದಿದೆ ಎಂಬ ಆತಂಕದಿಂದ ಗ್ರಾಮಸ್ಥರು ಭಯಭೀತರಾದರು.
ಗ್ರಾಮಸ್ಥರ ಆತಂಕ ಫೋಟೋ ಮೂಲಕ ಹರಡಿದ ಹುಲಿಯ ವದಂತಿ ಅರಣ್ಯ ಇಲಾಖೆಗೆ ತಲುಪಿತು. ಇಲ್ಲಿನ ಅರಣ್ಯ ವ್ಯಾಪ್ತಿಯಲ್ಲಿ ಸಾಮಾನ್ಯವಾಗಿ ಹುಲಿ ಕಾಣಿಸಿಕೊಳ್ಳುವುದಿಲ್ಲ. ಫೋಟೋದಲ್ಲಿರುವುದು ಚಿರತೆಯಾಗಿದ್ದು ಗ್ರಾಮಸ್ಥರು ಆತಂಕ ಪಡಬೇಡಿ ಎಂದು ಕಾರವಾರ ಅರಣ್ಯ ವಿಭಾಗದ ಆರ್‌ಎಫ್‌ಒ ಗಜಾನನ ನಾಯ್ಕ ಸ್ಪಷ್ಟಪಡಿಸಿದರು. ಸ್ಥಳಕ್ಕೆ ಅರಣ್ಯ ಸಿಬ್ಬಂದಿಯನ್ನು ಕಳುಹಿಸಿ ಪರಿಶೀಲನೆ ನಡೆಸಲಾಗುವುದೆಂದು ತಿಳಿಸಿದರು.