ಅಂಕೋಲಾ: ಗೋಕರ್ಣ ತದಡಿಯಿಂದ ಪೂಜಗೇರಿ ಮಾರ್ಗವಾಗಿ ಬೇಲೆಕೇರಿ ಸಂಪರ್ಕಿಸುವ ರಾಜ್ಯ ಹೆದ್ದಾರಿ ರಾಶಿ ರಾಶಿ ಗುಂಡಿಗಳಿಂದ ತುಂಬಿದ್ದು ಸರಿಪಡಿಸುವಂತೆ ಸಾರ್ವಜನಿಕರು ಆಗ್ರಹಿಸುತ್ತಲೇ ಬಂದಿದ್ದರು. ಮಳೆಗಾಲದ ನೆಪ ಹೇಳಿದ ಲೋಕೋಪಯೋಗಿ ಇಲಾಖೆ ಬಿಡುವಿನ ವೇಳೆಯೂ ಸರಿಪಡಿಸುವುದಿರಲಿ ಅತ್ತ ಕಡೆಯೂ ತಿರುಗಿ ನೋಡಿಲ್ಲ. ಆಡಳಿತ ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಲೇ ಸಾರ್ವಜನಿಕರು ಜೀವಭಯದಲ್ಲಿ ಸಂಚರಿಸುತ್ತಿದ್ದರು. ಬುಧವಾರ ತಡರಾತ್ರಿ ಇಲ್ಲವೇ ಗುರುವಾರ ನಸುಕಿನ ವೇಳೆ ರಸ್ತೆಯಲ್ಲಿ ಇದ್ದಕ್ಕಿದ್ದಂತೆ ಸಸ್ಯಗಳ ಸಾಲು ಕಂಡುಬರುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ದೃಶ್ಯಾವಳಿಗಳನ್ನು ನೋಡಿ ತಾಲ್ಲೂಕಿನಲ್ಲಿ ಹೊಸ ಉದ್ಯಾನವನ ಸೃಷ್ಟಿಯಾಯಿತೆ ಎನ್ನುವ ವಿಡಂಬನೆ ವ್ಯಕ್ತವಾಗುತ್ತಿದೆ. ಕೇವಲ ಒಂದು ಕಿಲೋಮೀಟರ್ ಅಂತರದ ರಸ್ತೆಯಲ್ಲಿ ಸಾವಿರಾರು ಹೊಂಡಗಳಿದ್ದು ಅಲ್ಲಲ್ಲಿ ಸಾಲಾಗಿ ಗಿಡಗಳನ್ನು ನೆಟ್ಟಿದ್ದಾರೆ.
ತಾಲೂಕಿನಲ್ಲಿ ಗಣೇಶ ಚತುರ್ಥಿಯ ಸಂಭ್ರಮ ಹೆಚ್ಚಿದ್ದು ವಿಘ್ನನಿವಾರಕನ ಪ್ರತಿಷ್ಠಾಪನೆಗೆ ಕರೆತರುವ ವೇಳೆಯೋ ಇಲ್ಲವೇ ವಿಸರ್ಜನೆಯ ವೇಳೆಯೋ ಈ ರಸ್ತೆಯಲ್ಲಿ ಸಂಚರಿಸಿ ಮೂರ್ತಿಗೆ ಹಾನಿಯಾಗಿರುವ ಕಾರಣವೋ ಇಲ್ಲವೇ ಹಬ್ಬದ ಸಂದರ್ಭದಲ್ಲಿಯೂ ತಾತ್ಕಾಲಿಕ ದುರಸ್ತಿಯನ್ನು ಮಾಡದ ಆಡಳಿತಕ್ಕೆ ಧಿಕ್ಕಾರ ವ್ಯಕ್ತಪಡಿಸಲೋ ಇಲ್ಲವೇ ಇನ್ಯಾವುದೋ ಕಾರಣಕ್ಕೋ ಸಾಲುಸಾಲಾಗಿ ಆಗಿ ಗಿಡಗಳನ್ನು ನೀಡಲಾಗಿದ್ದು ವನಮಹೋತ್ಸವ ಆಚರಣೆಯಂತೆ ಬಿಂಬಿಸಲಾಗಿದೆ. ಆಡಳಿತ ವ್ಯವಸ್ಥೆಯ ವಿರುದ್ಧ ವಿಡಂಬನೆಯ ಪ್ರತಿಭಟನೆಯಾಗಿದ್ದರೂ ತಾಲ್ಲೂಕಿನ ಜನತೆ ರಸ್ತೆಯ ಅವ್ಯವಸ್ಥೆ ಕಂಡು ಗಿಡಗಳನ್ನು ನೆಟ್ಟವರಿಗೆ ಧನ್ಯವಾದ ಹೇಳಿ ಇನ್ನಾದರೂ ಅಧಿಕಾರಿಗಳು ಜನಪ್ರತಿನಿಧಿಗಳು ರಸ್ತೆಯ ಕಡೆಗೆ ಗಮನ ಹರಿಸಲಿ ಎಂದು ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ.