ಅಂಕೋಲಾ: ಕೇವಲ ಮಾನವರಲ್ಲದೆ ಜೀವ ಸಂಕುಲವನ್ನು ನಾಶ ಮಾಡುವ ಅಪಾಯಕಾರಿ ಯೋಜನೆಯನ್ನು ಜಾರಿಗೆ ತಂದು ಗಾಂಧೀಜಿಯ ಆಶಯಗಳ ವಿರುದ್ಧ ಸರ್ಕಾರಗಳು ನಡೆಯುತ್ತಿವೆ ಎಂದು ಕಡಲ ಜೀವಶಾಸ್ತ್ರದ ನಿವೃತ್ತ ಅಧ್ಯಾಪಕಡಾ.ವಿ.ಎನ್ ನಾಯಕ ಹೇಳಿದರು.
ಅವರು ಅಂಕೋಲಾ ಉಳಿಸಿ ಹಾಗೂ ಕೇಣಿ ವಾಣಿಜ್ಯ ಬಂದರು ವಿರೋಧಿ ಹೋರಾಟಗಾರರ ಸಮಿತಿಯಿಂದ ಗಾಂಧಿ ಜಯಂತಿಯ ನಿಮಿತ್ತ ಪಟ್ಟಣದ ಸ್ವಾತಂತ್ರ್ಯ ಸಂಗ್ರಾಮ ಭವನದ ಆವರಣದಲ್ಲಿ ಬಂದರು ವಿರೋಧಿ ಸಂಬಂಧ ಮುಂದಿನ ಹೋರಾಟದ ಬಗ್ಗೆ ತೀರ್ಮಾನ ಕೈಗೊಳ್ಳಲು ಸೇರಿದ ಸಭೆಯಲ್ಲಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು. ಬಂದರು ವಿರೋಧಿಸಿ ನಿರಂತರ ಹೋರಾಟ ಮಾಡಲಾಗುತ್ತದೆ. ಆದರೂ ಇಲ್ಲಿಯವರೆಗೆ ಸೂಕ್ತ ಸ್ಪಂದನೆ ಇಲ್ಲ.ಹಾಗಾಗಿ ಸಮಿತಿಯಿಂದ ನಡೆಯುವ ಮುಂದಿನ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ನೀಡುತ್ತೇವೆ ಎಂದರು.
ನ್ಯಾಯವಾದಿ ಉಮೇಶ ನಾಯ್ಕ ಮಾತನಾಡಿ, ಮೀನುಗಾರರ ಸಂಕಷ್ಟಗಳನ್ನು ಸರಕಾರ ಅರ್ಥ ಮಾಡಿಕೊಳ್ಳಬೇಕು. ಯೋಜನೆಯಿಂದ ಸ್ಥಳೀಯರ ಮೇಲಾಗುವ ದುಷ್ಪರಿಣಾಮಗಳ ಅರಿವು ಇಲ್ಲದೇ ಜಿಲ್ಲೆಗೆ ಮಾತ್ರ ದೊಡ್ಡ ಆಘಾತ ನೀಡುವ ಯೋಜನೆಗಳನ್ನು ಜಾರಿ ಮಾಡಲು ಹೊರಟಿರುವುದು ಸರಿಯಲ್ಲ. ಯಾರಿಗೂ ಬೇಡವಾದ ಯೋಜನೆಗಳ ಜಾರಿಗೆ ಮುಂದಾದರೆ ಎಲ್ಲಾ ರೀತಿಯ ಹೋರಾಟಕ್ಕೂ ನಾವು ಮುಂದಾಗಿ ಸಮಿತಿಗೆ ಬೆಂಬಲ ನೀಡುತ್ತೇವೆ.
ಸಂಘಟನೆಯ ಪ್ರಮುಖ ಸಂಜು ಬಲೆಗಾರ, ಸಂಘಟನೆ ಎಂದರೆ ಬದ್ಧತೆ ಅದಕ್ಕೆ ಆತ್ಮಬಲ ಮತ್ತು ಮನೋಬಲ ಬೇಕು. ಹೋರಾಟಕ್ಕೆ ಎಲ್ಲರೂ ನಮಗೆ ಬೆಂಬಲ ನೀಡುತ್ತಿದ್ದಾರೆ. ತಾಲ್ಲೂಕಿನ ಎಲ್ಲಾ ಜನರಿಗೂ ಈಗ ಯೋಜನೆಯ ದುಷ್ಪರಿಣಾಮದ ಬಗ್ಗೆ ಅರ್ಥ ಆಗುತ್ತಿದೆ. ಸರ್ಕಾರ ಯೋಜನೆ ಕೈಬಿಡುವವರೆಗೆ ಹೋರಾಟ ನಿಲ್ಲದು ಎಂದರು. ಸಮಿತಿಯ ಸದಸ್ಯರು ಎಲ್ಲರೂ ಒಟ್ಟಾಗಿ ಅನಿರ್ಧಿಷ್ಟಾವಧಿವರಗೆ ಶಾಂತಿಯುತ ಉಪವಾಸ ಸತ್ಯಾಗ್ರಹ ನಡೆಸುವ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.